ಸೆನೆಕ
	ಕ್ರಿ.ಪೂ. ಸು. 4-ಕ್ರಿ.ಶ.65. ರೋಮ್ ದೇಶದ ಸ್ಟೋಯಿಕ್ ತತ್ತ್ವಜ್ಞಾನಿ, ರಾಜಕೀಯ ಧುರೀಣ, ಕವಿ ಹಾಗೂ ನಾಟಕಕಾರ. ಸ್ಪೇನಿನ ಕಾರ್ಡೋವ ಎಂಬಲ್ಲಿ ಜನಿಸಿದ. ರೋಮನ್ ಸಾಮ್ರಾಟರಲ್ಲಿ ಅತ್ಯಂತ ಕ್ರೂರಿಯೆಂದು ಪ್ರಸಿದ್ಧನಾದ ನೀರೋಗೆ ಈತ ಕೆಲಕಾಲ ಬೋಧಕನೂ ಮಂತ್ರಿಯೂ ಆಗಿದ್ದ. ಸಮಕಾಲೀನ ವಿಚಾರಶೀಲರಲ್ಲಿ ಈತ ಗುಣವಂತನೆಂದೂ ಪ್ರಾಜ್ಞನೆಂದೂ ಹೆಸರುಗಳಿಸಿದ್ದ. ಈತನ ಕಡೆಯ ದಿನಗಳು ಸುಖಮಯವಾಗಿರಲಿಲ್ಲ. ನೀರೋ ರಾಜನನ್ನು ಕೊಲ್ಲಿಸಲು ಸಂಚು ಹೂಡಿದ ಎಂಬ ಅಪವಾದಕ್ಕೆ ಗುರಿಯಾಗಿ ಈತ ಆತ್ಮಹತ್ಯೆ ಮಾಡಿಕೊಂಡ. 

	ಈತ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಇವನ ಬರೆಹಗಳಲ್ಲಿ 12 ತತ್ತ್ವಶಾಸ್ತ್ರ ಪ್ರಬಂಧಗಳು, 124 ಪತ್ರಗಳು, ಪವನಶಾಸ್ತ್ರ ಕುರಿತ ಒಂದು ಪ್ರಬಂಧ, ಒಂದು ವಿಡಂಬನಕೃತಿ, 9 ದುರಂತ ನಾಟಕಗಳು ಈಗ ಲಭ್ಯವಿವೆ. ದುರಂತ ನಾಟಕಗಳಲ್ಲಿ ಈಡಿಪಸ್, ಮೀಡಿಯ ನಾಟಕಗಳು ಪ್ರಸಿದ್ಧವಾಗಿವೆ. ಇವನ ನಾಟಕಗಳಲ್ಲಿ ಸ್ಟೋಯಿಕ್ (ನಿರಾಶಾವಾದಿ) ತತ್ತ್ವಜ್ಞಾನವೇ ಪ್ರಧಾನವಾಗಿದೆ. ಉದ್ರೇಕದಿಂದ ವಿಚಾರ ನಾಶವಾಗಿ ಇದೇ ದುರಂತಕ್ಕೆ ಕಾರಣವಾಗುತ್ತದೆ ಎಂಬುದು ಇವನ ಸಿದ್ಧಾಂತ. ಇವನ ನಾಟಕಗಳು ಇಟಲಿ, ಫ್ರಾನ್ಸ್, ಇಂಗ್ಲೆಂಡಿನ ದುರಂತ ನಾಟಕಗಳ ಮೇಲೆ ಬಹಳಷ್ಟು ಪ್ರಭಾವ ಬೀರಿವೆ.     	
		(ಎಚ್.ಎಸ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ